ದೆಹಲಿ: ಕರ್ನಾಟಕದ ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿಗಳ (ಡಿಸಿಸಿ) ಪುನರ್ರಚನೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಂತಿಮ ಮುದ್ರೆ ಒತ್ತಿದೆ. ರಾಜ್ಯದ ಒಟ್ಟು 35 ಸಾಂಸ್ಥಿಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಸ್ತಾವನೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದನೆ ನೀಡಿದ್ದು, ನೇಮಕಾತಿಯು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಕ್ಷದ ‘ಸಂಘಟನಾ ಸೃಜನ್ ಅಭಿಯಾನ’ದ ಅಡಿಯಲ್ಲಿ ಈ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಪ್ರತಿ ಜಿಲ್ಲೆಗೆ ನಿಯೋಜಿಸಲಾಗಿದ್ದ ಎಐಸಿಸಿ ವೀಕ್ಷಕರು ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಸಿ, ಕಾರ್ಯಕರ್ತರು ಮತ್ತು ಪ್ರಮುಖ ಮುಖಂಡರೊಂದಿಗೆ ಚರ್ಚಿಸಿ ಸವಿಸ್ತಾರ ವರದಿ ಸಲ್ಲಿಸಿದ್ದರು. ಈ ವರದಿಗಳ ಪರಿಶೀಲನೆ ಹಾಗೂ ಹಿರಿಯ ನಾಯಕರೊಂದಿಗೆ ನಡೆದ ಮುಖಾಮುಖಿ ಸಮಾಲೋಚನೆಯ ನಂತರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ನೂತನ ಪಟ್ಟಿಯ ಪ್ರಕಾರ, ಬೆಂಗಳೂರು ನಗರದ ಪ್ರಮುಖ ವಿಭಾಗಗಳಾದ ಬೆಂಗಳೂರು ಉತ್ತರಕ್ಕೆ ಅಬ್ದುಲ್ ವಾಜಿದ್, ದಕ್ಷಿಣಕ್ಕೆ ಒ. ಮಂಜುನಾಥ್, ಪೂರ್ವಕ್ಕೆ ಡಿ. ಕೆ. ಮೋಹನ್ ಬಾಬು, ಪಶ್ಚಿಮಕ್ಕೆ ಹನುಮಂತರಾಯಪ್ಪ ಹಾಗೂ ಕೇಂದ್ರ ವಿಭಾಗಕ್ಕೆ ಜೆ. ಶರವಣನ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಿ. ಪ್ರಸನ್ನ ಕುಮಾರ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ, ಉಡುಪಿಗೆ ಕಿಶನ್ ಕುಮಾರ್ ಹೆಗ್ಡೆ, ಶಿವಮೊಗ್ಗಕ್ಕೆ ಎಚ್. ಸಿ. ಯೋಗೇಶ್, ಮೈಸೂರು ನಗರಕ್ಕೆ ಆರ್. ಮೂರ್ತಿ ಹಾಗೂ ಮೈಸೂರು ಗ್ರಾಮೀಣಕ್ಕೆ ಬೀರಿ ಹುಂಡಿ ಬಸವಣ್ಣ ಅವರನ್ನು ನೇಮಿಸಲಾಗಿದೆ. ಬೆಳಗಾವಿ ನಗರಕ್ಕೆ ಸಲಾವುದ್ದೀನ್ ಸಿ. ಸಲೀಂ ಬಿ. ಖತೀಬ್ (ರಾಜಾಸಲೀಂ), ಬೆಳಗಾವಿ ಗ್ರಾಮೀಣಕ್ಕೆ ಬಸವರಾಜ ಶೇಗಾವಿ, ಹುಬ್ಬಳ್ಳಿ-ಧಾರವಾಡ ನಗರಕ್ಕೆ ಸದಾನಂದ್ ವಿ. ದಂಗನಾವರ್ ಹಾಗೂ ಧಾರವಾಡ ಗ್ರಾಮೀಣಕ್ಕೆ ಚಂದ್ರಶೇಖರ್ ಜುಟ್ಟಲ್ ನೇಮಕಗೊಂಡಿದ್ದಾರೆ. ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಈ ಹೊಸ ನೇಮಕಾತಿಗಳನ್ನು ಕೈಗೊಳ್ಳಲಾಗಿದೆ.
